ಯುಗಾದಿ: ಆಹಾರ ಮತ್ತು ಆರೋಗ್ಯ (ಕುಶಲವೇ ಕ್ಷೇಮವೇ)
ಯುಗಾದಿ ಸ್ನಾನ
ಯುಗಾದಿ ಹಬ್ಬದಲ್ಲಿ ತಲೆಗೆ ಮತ್ತು ಮೈಗೆ ಸುಗಂಧ ತೈಲವನ್ನು ಹಚ್ಚಿ ಮಾಲೀಸು ಮಾಡಿಕೊಂಡು ಸ್ನಾನ ಮಾಡಬೇಕು. ಎಳ್ಳೆಣ್ಣೆಯನ್ನು ಇಲ್ಲವೇ ಗುಲಾಬಿ ತೈಲವನ್ನು ಸ್ವಲ್ಪ ಬಿಸಿಮಾಡಿ ಮೈಗೆಲ್ಲ ಹಚ್ಚಿ ಬೆರಳುಗಳಿಂದ ಮೇಲ್ಮುಖವಾಗಿ ಮಾಲೀಸು ಮಾಡಬೇಕು. ಇದರಿಂದ ದೇಹದ ಉಷ್ಣವು ದೂರವಾಗುವುದಲ್ಲದೇ ಮನಸ್ಸು ಉಲ್ಲಾಸವಾಗಿರುತ್ತದೆ. ಕೀಲು ನೋವು, ಸೊಂಟ ನೋವು ಮತ್ತು ಬೆನ್ನು ನೋವು ಕಡಿಮೆಯಾಗುತ್ತದೆ. ನಿದ್ರೆ ಚೆನ್ನಾಗಿ ಬರುತ್ತದೆ. ಕಣ್ಣಿನ ದೃಷ್ಟಿಗೂ ಇದು ಒಳ್ಳೆಯದು. ಜೊತೆಗೆ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ. ಚರ್ಮದಲ್ಲಿರುವ ನವೆ, ಗುಳ್ಳೆ ಮುಂತಾದ ತೊಂದರೆಗಳು ಮಾಯವಾಗುತ್ತವೆ.
ಯುಗಾದಿಯ ಅಡುಗೆಯಲ್ಲಿ ಬೇವು-ಬೆಲ್ಲ ಬಳಕೆ
ಯುಗಾದಿಯ ಅಡುಗೆಯಲ್ಲಿ ಬೇವು-ಬೆಲ್ಲ ಪ್ರಧಾನ ಸ್ಥಾನ ಪಡೆದಿದೆ. ಬೇವಿನ ಹೂಗಳನ್ನು ಒಣಗಿಸಿಟ್ಟುಕೊಂಡು ಸಾಂಬಾರು ಮಾಡುವಾಗ ಬಳಸಬೇಕು. ಅಲ್ಲದೇ ಒಣಗಿದ ಬೇವಿನ ಹೂವುಗಳನ್ನು ನಮಗೆ ಬೇಕೆನಿಸಿದಾಗಲೆಲ್ಲ ಎಣ್ಣೆಯಲ್ಲಿ ಹುರಿದು ಬಿಸಿ ಅನ್ನದೊಂದಿಗೆ ಉಪ್ಪು ಮತ್ತು ತುಪ್ಪ ಬೆರೆಸಿ ತಿನ್ನಬೇಕು. ಇದು ರುಚಿಕರ ಮತ್ತು ಆರೋಗ್ಯಕರ.
ಬೆಂಗಳೂರು, ಮೈಸೂರು ಸೀಮೆಗಳಲ್ಲಿ ಬೇವಿನೆಲೆಯನ್ನು ಬೆಲ್ಲದೊಂದಿಗೆ ಬೆರೆಸಿ ತಿನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಹೊಸ ಮಡಕೆಯಲ್ಲಿ ಹುರಿಗಡಲೆ ಪುಡಿ, ಬೆಲ್ಲದ ಪುಡಿ, ಹುಣಸೆಹುಳಿ ಬೆರೆಸಿ ಪಾನೀಯ ತಯಾರಿಸಿ ಅದಕ್ಕೆ ಬೇಸಿಗೆ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ, ಬಾಳೆ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಪಾನೀಯಕ್ಕೆ ಬೆರೆಸಿ ಕುಡಿಯುತ್ತಾರೆ. ಇದಕ್ಕೆ ಎಳೆಯ ಬೇವಿನೆಲೆ ಇಲ್ಲವೇ ಬೇವಿನ ಹೂಗಳನ್ನು ಬೆರೆಸುತ್ತಾರೆ.
ಯುಗಾದಿಯ ಅಡುಗೆಯಲ್ಲಿ ಮಾವಿನಕಾಯಿ, ದಾಳಿಂಬೆ ಬಳಕೆ
ಯುಗಾದಿಯಂದು ಪ್ರಧಾನವಾಗಿ ಸೇವಿಸುವ ಮಾವಿನ ಕಾಯಿಯ ಹುಳಿ ಮತ್ತು ಒಗಚು ರುಚಿ ನಾಲಿಗೆಗೆ ಬಲು ಹಿತ. ಈ ಹಬ್ಬದಲ್ಲಿ ಮಾಡುವ ಮಾವಿನಕಾಯಿ ಚಿತ್ರಾನ್ನ, ಚಟ್ನಿ, ಬಿಸಿ ಉಪ್ಪಿನಕಾಯಿ ಎಲ್ಲವೂ ಸ್ವಾದಿಷ್ಟ ಮತ್ತು ಆರೋಗ್ಯಕರ.
ಹುರಿಗಡಲೆಯ ಪುಡಿ ತಯಾರಿಸಿ ಅದಕ್ಕೆ ಬೆಲ್ಲ, ತುರಿದ ಒಣಕೊಬ್ಬರಿ ಸೇರಿಸಿ ಹುಣಸೆ ಹುಳಿ, ಗೋಡಂಬಿ, ಬಾದಾಮಿ, ದ್ರಾಕ್ಷಿ, ಆಕ್ರೋಟ, ಚರ್ರಿ ಮುಂತಾದವುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಬೆರೆಸಬೇಕು. ಇದಕ್ಕೆ ಸ್ವಲ್ಪ ಮಾವಿನಕಾಯಿ ತುರಿದು ಹಾಕಬೇಕು. ಬೇವಿನ ಹೂಗಳನ್ನು ಹಾಕಬೇಕು. ಇದಕ್ಕೆ ಹಾಲು, ನೀರು ಬೆರೆಸಿ ಹೊಸ ಮಡಕೆಯಲ್ಲಿಟ್ಟು ಇಲ್ಲವೇ ಫ್ರಿಡ್ಜ್ ನಲ್ಲಿಟ್ಟು 3-4 ಗಂಟೆ ಬಿಟ್ಟು ತಿನ್ನುವುದರಿಂದ ತಂಪಾಗಿ, ರುಚಿಕರವಾಗಿ, ಪುಷ್ಟಿಕರವಾಗಿರುತ್ತದೆ. ಬೇವೆಂದರೆ ಕಹಿ ಎಂದು ಓಡಿಹೋಗುವ ಮಕ್ಕಳೂ ಖುಷಿಯಿಂದ ತಿನ್ನುತ್ತಾರೆ. ಐಸ್‌ಕ್ರೀಂ ತರಹ ಮುದನೀಡುತ್ತದೆ.ಈ ಕಾಲದಲ್ಲಿ ಹೇರಳವಾಗಿ ಸಿಗುವ ದಾಳಿಂಬೆ ಹಣ್ಣು ಹುಳಿ, ಒಗರು, ಸಿಹಿರಸದಿಂದ ಕೂಡಿದೆ. ದಾಳಿಂಬೆಯಲ್ಲಿ ಸುಣ್ಣಾಂಶ, ರಂಜಕದ ಅಂಶ, ಅಧಿಕವಾಗಿದೆ. ಅಲ್ಲದೇ ವಿಟಮಿನ್ ಸಿ ಅಂಶ ಹೆಚ್ಚಾಗುವುದರಿಂದ (100 ಗ್ರಾಂ ಹಣ್ಣಿನಲ್ಲಿ 16 ಮಿಲಿಗ್ರಾಂ) ಚರ್ಮದಲ್ಲಿ ಉಷ್ಣದಿಂದ ಉಂಟಾಗುವ ಗುಳ್ಳೆಗಳನ್ನ ತಡೆಯುವುದಲ್ಲದೇ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಬಾಯಿಹುಣ್ಣು, ಕಣ್ಣುರಿ, ತಲೆನೋವುಗಳಿಂದೆಲ್ಲ ರಕ್ಷಿಸುತ್ತದೆ.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com
0 Comments