ಉದ್ಯೋಗದಲ್ಲಿ ಹತಾಶೆ ಕಾಡುವುದೇಕೆ?; ಕೆಲಸದಲ್ಲಿ ಯಶಸ್ಸು ಗಳಿಸಲು ಸರಳ ಸೂತ್ರಗಳು (ಹಣಕ್ಲಾಸು)
ಬದುಕಿನ ಮೂಲ ಉದ್ದಶವೇನು ಗೊತ್ತೇ? ಖುಷಿಯಾಗಿರುವುದು! ಒಂದೊಳ್ಳೆ ಜೀವನ ನಡೆಸುವುದು! ಈ ಮೂಲ ಉದ್ದೇಶಗಳನ್ನು ಈಡೇರಿಸಲಾಗದ ಯಶಸ್ಸು ಮತ್ತು ಹಣದಿಂದ ಯಾವ ಪ್ರಯೋಜನವೂ ಇಲ್ಲ. ಇದರರ್ಥ ಸಂಪತ್ತು ಸೃಷ್ಟಿಸಬಾರದು ಎಂದಲ್ಲ. ನಮಗೆ ಇಷ್ಟವಿಲ್ಲದ ಯಾವುದೇ ಕೆಲಸವನ್ನೂ ಮಾಡಲೇ ಬಾರದು ಎಂದಲ್ಲ. ಪ್ರಾಥಮಿಕವಾಗಿ ನಮಗೇನು ಬೇಕು, ನಮಗೆ ಯಾವ ಕೆಲಸ ಮಾಡುವುದು ಖುಷಿ ಕೊಡುತ್ತದೆ? ಎನ್ನುವುದನ್ನು ನಾವು ಅರಿತುಕೊಳ್ಳಬೇಕು.
ಆದರೆ ನಮ್ಮಲ್ಲಿ ಏನಾಗಿದೆ? ವಿದ್ಯಾಭ್ಯಾಸದ ಸಮಯದಲ್ಲಿಂದ ಎಡವುದು ಶುರುವಾಗುತ್ತದೆ. ಅದು ಕೆಲಸದ ವೇಳೆಯಲ್ಲೂ ಮುಂದುವರಿಯುತ್ತದೆ. ಬಹುತೇಕ ಜನ ಅವರಿಗೇನು ಇಷ್ಟ, ಅವರಿಗೇನು ಬೇಕು ಎನ್ನುವುದು ತಿಳಿದುಕೊಳ್ಳದೆ ಇಲ್ಲಿನ ಆಟವನ್ನು ಮುಗಿಸಿ ಹೊರಟು ಬಿಡುತ್ತಾರೆ. ಗಲ್ಪ್ ಎನ್ನುವ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಕಂಪನಿ 2024 ರಲ್ಲಿ ನಡೆಸಿರುವ ಸರ್ವೆಯಲ್ಲಿ ತಿಳಿದು ಬಂದಿರುವ ವಿಷಯ ಅಚ್ಚರಿ ಗೊಳಿಸುವುದಿಲ್ಲ. ಬದಲಿಗೆ ನಮ್ಮ ಸಮಾಜದಲ್ಲಿ ಇರುವ ನೋವು, ಹತಾಶೆ, ತಪ್ಪುಗಳನ್ನು ಎತ್ತಿ ತೋರಿಸುತ್ತದೆ. ಈ ಸರ್ವೇ ಪ್ರಕಾರ ಭಾರತದಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ,ನೂರಕ್ಕೆ 86 ಪ್ರತಿಶತ ಕೆಲಸಗಾರರು 'ಸಫರಿಂಗ್' ನಲ್ಲಿದ್ದೇವೆ ಎಂದು ಹೇಳಿದ್ದಾರೆ. ಕೇವಲ 14 ಪ್ರತಿಶತ ಜನ ಮಾತ್ರ 'Thriving' ಎಂದು ಹೇಳಿದ್ದಾರೆ.
ಈ ಸಂಸ್ಥೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೂರು ವಿಭಾಗಗಳಲ್ಲಿ ಕೆಲಸಗಾರರನ್ನು ವಿಂಗಡಿಸಿದ್ದಾರೆ. ಅದ್ಭುತವಾಗಿ ಜೀವನದಲ್ಲಿ ಮುಂದೆ ಬರುತ್ತಿದ್ದೇವೆ, ಮಾಡುತ್ತಿರುವ ಕೆಲಸ ತುಂಬಾ ಇಷ್ಟವಾಗಿದೆ ಎಂದವರಲ್ಲಿ ಕೂಡ ಹತ್ತಕ್ಕೆ ಹತ್ತು ಅಂಕ ಗಳಿಸಿದವರಲ್ಲ ಎನ್ನುವುದನ್ನು ಗಮನಿಸಬೇಕು. ಹತ್ತರಲ್ಲಿ ಏಳು ಮತ್ತು ಅದಕ್ಕಿಂತ ಹೆಚ್ಚಿನ ಅಂಕವನ್ನು ಗಳಿಸಿದವರನ್ನು Thriving ಪಟ್ಟಿಯಲ್ಲಿ ಹಾಕಲಾಗಿದೆ. ಉಳಿದ 86 ಪ್ರತಿಶತ ಜನ ಕೆಲಸ ಮತ್ತು ಬದುಕಿನಲ್ಲಿ ಬೇಸೆತ್ತು ಹೋಗಿದ್ದೇವೆ, ಭವಿಷ್ಯದ ಬಗ್ಗೆ ನೆನಸಿಕೊಂಡರೆ ಭಯವಾಗುತ್ತದೆ ಎಂದಿದ್ದಾರೆ. ಅದರಲ್ಲೂ 40 ಪ್ರತಿಶತ ಕೆಲಸ ಮತ್ತು ಬದುಕಿನಲ್ಲಿ ಅತ್ಯಂತ ದುಃಖಿಯಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ. ಇದು ಸೌತ್ ಏಷ್ಯಾ ದೇಶಗಳ ಕಥೆ.
ಜಗತ್ತಿನ ಲೆಕ್ಕಾಚಾರ ತೆಗೆದುಕೊಂಡರೂ ಕೇವಲ 34 ಪ್ರತಿಶತ ಜನ ಬದುಕು ಸುಂದರ, ಅದ್ಬುತ, thriving ಕೆಟಗರಿಯಲ್ಲಿ ಬರುತ್ತಾರೆ. ಉಳಿದವರ ಬಾಳು ಅದೇ ಗೋಳು. ಹೀಗೇಕೆ ಎನ್ನುವುದನ್ನು ಹುಡುಕಿ ಹೋದಾಗ ತಿಳಿಯುವ ಅಂಶ ಜಗತ್ತಿನಾದ್ಯಂತ ಸೇಮ್.
ಪೇಮೆಂಟ್, ಆದಾಯ, ಹಣ: ನಾವು ಯಾವುದೇ ಕೆಲಸ ಮಾಡಲಿ ಅದರಿಂದ ಒಂದಷ್ಟು ಹಣಕಾಸು ಫಲಿತಾಂಶವಾಗಿ ಸಿಗಬೇಕು. ಇದು ದೊಡ್ಡ ಮೋಟಿವೇಟರ್. ಜಗತ್ತಿನ 90 ಕ್ಕೂ ಹೆಚ್ಚು ಜನರನ್ನು ಪ್ರೇರೇಪಿಸುವುದು ಹಣ. ತಿಂಗಳ ಕೊನೆ ಸಿಕ್ಕುವ ಪೇ ಚೆಕ್, ಬಹಳಷ್ಟು ಜನ ಇನ್ನೂ ಕೆಲಸ ಮಾಡುತ್ತಿರುವುದಕ್ಕೆ ಕಾರಣವಾಗಿದೆ. ಎಷ್ಟರಮಟ್ಟಿಗೆ ಎಂದರೆ ತಮ್ಮ ಕನಸುಗಳನ್ನು ಬದಿಗಿಟ್ಟು ಚಿಟಿಕೆ ಹೊಡೆಯುವಷ್ಟರಲ್ಲಿ ಬರುವ ತಿಂಗಳ ಸಂಬಳಕ್ಕೆ ಜೋತು ಬೀಳುವಷ್ಟು! ಹಣ ಎನ್ನುವುದು ಮಾಡಿದ ಕೆಲಸಕ್ಕೆ ಸಿಗುವ ಸಣ್ಣ ಪ್ರತಿಫಲ. ಇದು ಬಹಳ ಮುಖ್ಯ. ಇದು ಇಂಧನವಿದ್ದಂತೆ, ಇದಿಲ್ಲದೆ ಅದೆಷ್ಟೇ ದೊಡ್ಡ ಕನಸುಗಾರನಾದರೂ ಬಹಳ ಕಾಲ ಬದುಕಲು, ಕನಸಿನ ಬೆಂಬೆತ್ತಲು ಸಾಧ್ಯವಿಲ್ಲ. ಆದರೆ ಇದು ಕನಸನ್ನೇ ಕೊಲ್ಲುವ ಮಟ್ಟಕ್ಕೆ ಹೋಗಬಾರದು.
ಪ್ರೆಸ್ಟೀಜ್: ಇದು ಕೆಲಸ ಮಾಡಲು ಇನ್ನೊಂದು ಪ್ರೇರಣೆ. ಕೆಲವರಿಗೆ ಕೆಲಸ ಮಾಡಿ ಅದರಿಂದ ಸೈ ಎನ್ನಿಸಿಕೊಂಡಾಗ ಸಿಗುವ ಮರ್ಯಾದೆ, ಗೌರವ ಹೆಚ್ಚಿನ ಬಲವನ್ನು, ಖುಷಿಯನ್ನು ನೀಡುತ್ತದೆ. ಸಮಾಜದಲ್ಲಿ ಹೆಚ್ಚುವ ಗೌರವಕ್ಕೆ ಅವರು ಕೆಲಸ ಮಾಡುತ್ತಾರೆ. ಹಣ ಮುಖ್ಯವಾಗಿರುತ್ತದೆ, ಆದರೆ ಅದಕ್ಕಿಂತ ಮುಖ್ಯವಾಗಿ ಕೆಲಸದ ಗೆಲುವಿನಿಂದ ಸಿಗುವ ಮರ್ಯಾದೆ ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಜಗತ್ತಿನ ಐದಾರು ಪ್ರತಿಶತ ಜನ ಈ ವರ್ಗದಲ್ಲಿ ಬರಬಹುದು.
ಪ್ರೋಸೆಸ್: ಮಾಡುವ ಕೆಲಸವಷ್ಟೇ ಮುಖ್ಯವಾಗುವುದು ಜಗತ್ತಿನಲ್ಲಿ 0.1 ಪ್ರತಿಶತ ಜನಕ್ಕಿಂತ ಕಡಿಮೆ ಜನರಿಗೆ ಮಾತ್ರ. ಇವರಿಗೆ ಇದರಿಂದ ಸಿಗುವ ಹಣ, ಮರ್ಯಾದೆ ಯಾವುದೂ ಮುಖ್ಯವಾಗುವುದಿಲ್ಲ. ಅವರಿಗೆ ಕೆಲಸದ ಪ್ರಕ್ರಿಯೆ ಮಾತ್ರ ಮುಖ್ಯವಾಗುತ್ತದೆ. ಸೋಲು, ಗೆಲುವು, ಹಣ, ಮರ್ಯಾದೆ ಇದ್ಯಾವುದರ ಬಗ್ಗೆ ಅವರು ಚಿಂತಿಸುವುದೇ ಇಲ್ಲ. ಎಲಾನ್ ಮಸ್ಕ್ ಇಂತಹ ವ್ಯಕ್ತಿ ಎಂದು ಹೇಳಬಹುದು. ಇದೆ ರೀತಿ ಬಹಳಷ್ಟು ಜನ ವಿಜ್ಞಾನಿಗಳು, ಬರಹಗಾರರು, ಕಲಾವಿದರನ್ನು ಕೂಡ ಈ ಕೆಟಗರಿಯಲ್ಲಿ ವಿಂಗಡಿಸಬಹುದು. ಅವರಿಗೆ ಕೆಲಸ ಬಿಟ್ಟು ಬೇರೆ ಪ್ರಪಂಚದ ಅರಿವಿರುವುದಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
0 Comments