ಟ್ರಂಪ್, ಮೋದಿ, ಹಾಗೂ ಭಾರತ-ಅಮೆರಿಕಾ ಬಾಂಧವ್ಯದ ಭವಿಷ್ಯ (ಜಾಗತಿಕ ಜಗಲಿ)

ಕಳೆದ ಒಂದು ದಶಕದ ಅವಧಿಯಲ್ಲಿ, ಭಾರತ ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ಬಂದಿದ್ದ ಅಲಿಪ್ತ ನೀತಿ ಆಧಾರಿತ ವಿದೇಶಾಂಗ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮರು ರೂಪಿಸುತ್ತಿರುವಂತೆ ಕಂಡುಬರುತ್ತಿದೆ.


ಅಲಿಪ್ತ ನೀತಿ ಭಾರತವನ್ನು ಜಾಗತಿಕ ವಿಚಾರಗಳಲ್ಲಿ ಯಾವುದೇ ಪಕ್ಷವನ್ನು ವಹಿಸದಂತೆ ನೋಡಿಕೊಂಡಿತ್ತು. ಆದರೆ ನರೇಂದ್ರ ಮೋದಿಯವರು ಅಲಿಪ್ತ ನೀತಿಯ ಬದಲಿಗೆ, ಬಹುಪಕ್ಷೀಯ (ಮಲ್ಟಿ ಅಲೈನ್ಮೆಂಟ್) ನೀತಿಯನ್ನು ಅನುಸರಿಸುತ್ತಿದ್ದು, ನಿರ್ದಿಷ್ಟ ಸಿದ್ಧಾಂತವನ್ನು ಅನುಸರಿಸುವ ಬದಲಿಗೆ, ತನ್ನ ಸ್ವಹಿತಾಸಕ್ತಿಗೆ ಅನುಕೂಲವಾಗುವ ರೀತಿಯಲ್ಲಿ ಹಲವು ರಾಷ್ಟ್ರಗಳೊಡನೆ ವ್ಯವಹರಿಸುತ್ತಿದೆ. ಈ ಕಾರ್ಯತಂತ್ರ ಭಾರತಕ್ಕೆ ವಿವಿಧ ಜಾಗತಿಕ ಶಕ್ತಿಗಳೊಡನೆ ಬಲವಾದ ಬಾಂಧವ್ಯ ಸ್ಥಾಪಿಸಿ, ವ್ಯಾಪಾರ, ಭದ್ರತೆ, ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ವ್ಯವಹಾರ ನಡೆಸಿ, ಸ್ವತಂತ್ರ ನಿರ್ಧಾರಗಳ ಮೂಲಕ ಭಾರತಕ್ಕೆ ಲಾಭವಾಗುವಂತೆ ಮಾಡಲು ಪೂರಕವಾಗಿದೆ. ಈ ಕ್ರಮಗಳ ಮೂಲಕ, ಭಾರತ ಜಾಗತಿಕ ಮಟ್ಟದಲ್ಲಿ ಪ್ರಮುಖ ಶಕ್ತಿಯಾಗಿದ್ದು, ತನ್ನ ಕಾರ್ಯತಂತ್ರ ಮತ್ತು ಆರ್ಥಿಕ ಆದ್ಯತೆಗಳನ್ನು ರಕ್ಷಿಸಿಕೊಳ್ಳುತ್ತಿದೆ.

ಕಳೆದ ವಾರ ವಾಷಿಂಗ್ಟನ್ ಭೇಟಿಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂಧಿಸಿದ ಪ್ರಧಾನಿ ಮೋದಿಯವರು ಟ್ರಂಪ್ ಸಹ ಹೇಗೆ ಈ ಬಹುಪಕ್ಷೀಯ ವಿಧಾನದ ತನ್ನದೇ ಆವೃತ್ತಿಯನ್ನು ಅನುಸರಿಸುತ್ತಿದ್ದಾರೆ ಎನ್ನುವುದನ್ನು ಸ್ವತಃ ಗಮನಿಸಿದ್ದಾರೆ. ಹಿಂದಿನ ಅಮೆರಿಕಾ ಅಧ್ಯಕ್ಷರುಗಳು ಯುರೋಪ್ ಜೊತೆಗೆ ಸಾಂಪ್ರದಾಯಿಕವಾದ ಬಲವಾದ ಬಾಂಧವ್ಯವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಿದ್ದರೆ, ಟ್ರಂಪ್ ವಿಭಿನ್ನವಾದ ವಿಧಾನವನ್ನು ಅನುಸರಿಸುತ್ತಿದ್ದಾರೆ.

ಟ್ರಂಪ್ ಯುರೋಪ್ ಜೊತೆಗಿನ ಅಮೆರಿಕಾದ ಬಾಧ್ಯತೆಗಳನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಬಾಂಧವ್ಯ ಸುಧಾರಿಸಲು ಪ್ರಯತ್ನ ನಡೆಸುತ್ತಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಬಹಿರಂಗವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ. ಹಿಂದೆಲ್ಲ ಅಮೆರಿಕಾ ತನ್ನ ಪಾಶ್ಚಾತ್ಯ ಸಹಯೋಗಿಗಳೊಡನೆ ಸೇರಿ, ಅಂತಾರಾಷ್ಟ್ರೀಯ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಎತ್ತಿಹಿಡಿಯುವ ಪ್ರಯತ್ನ ನಡೆಸುತ್ತಿತ್ತು. ಆದರೆ ಅಮೆರಿಕಾದ ಈಗಿನ ನಡೆ ಅದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಟ್ರಂಪ್ ಈಗ ಹೆಚ್ಚು ಹೊಂದಿಕೊಳ್ಳಬಲ್ಲ ಮತ್ತು ಊಹಿಸಲಸಾಧ್ಯವಾದ ಕಾರ್ಯತಂತ್ರದತ್ತ ಅಮೆರಿಕಾವನ್ನು ನಡೆಸುತ್ತಿದ್ದು, ಭೌಗೋಳಿಕ ರಾಜಕಾರಣದಲ್ಲಿ ಅದರ ಪಾತ್ರವನ್ನು ಮರು ರೂಪಿಸುತ್ತಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ 'ಅಮೆರಿಕಾ ಫಸ್ಟ್' ನೀತಿ ಅಮೆರಿಕಾದ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ ಇತರ ದೇಶಗಳೊಡನೆ ನೇರ ಒಪ್ಪಂದಗಳನ್ನು ಮಾಡಿಕೊಳ್ಳುವತ್ತ ಗಮನಹರಿಸುತ್ತದೆ. ಒಂದು ವೇಳೆ ಟ್ರಂಪ್ ಏನಾದರೂ ಯಶಸ್ಸು ಕಂಡರೆ, ಬಹಳಷ್ಟು ಜಾಗತಿಕ ಶಕ್ತಿಗಳು ಸಾಂಪ್ರದಾಯಿಕ ಸಹಭಾಗಿತ್ವವನ್ನು ಬದಿಗೊತ್ತಿ, ಈ ನೂತನ ವಿದೇಶಾಂಗ ನೀತಿಯನ್ನು ಅನುಸರಿಸುವ ಸಾಧ್ಯತೆಗಳಿವೆ.

ಅಮೆರಿಕಾದ ಜೊತೆಗೆ ಭಾರತದ ಬಾಂಧವ್ಯವನ್ನು ಹಿಂದೆಂದಿಗಿಂತಲೂ ಹೆಚ್ಚು ಬಲಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರಗಳಲ್ಲಿ ಅಮೆರಿಕಾವನ್ನು ದೂರವಿಡುತ್ತಿದ್ದ, ಅಲಿಖಿತ ನಿಯಮದಂತಿದ್ದ ತನ್ನ ದೀರ್ಘಕಾಲೀನ ಅಲಿಪ್ತ ನೀತಿಯಿಂದ ದೂರಕ್ಕೆ ಒಯ್ದಿದ್ದಾರೆ.

ಇದೇ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ರಷ್ಯಾದೊಡನೆ ಭಾರತದ ದೀರ್ಘಾವಧಿಯ ಸಹಯೋಗವನ್ನು ಮುಂದುವರಿಸಿದ್ದು, ಚೀನಾದ ಜೊತೆಗೂ ರಾಜತಾಂತ್ರಿಕ ಮಾತುಕತೆಗಳನ್ನು ಮುಕ್ತವಾಗಿ ಇರಿಸಿದ್ದಾರೆ. ಚೀನಾದ ಜೊತೆ ಮುಂದುವರಿದಿರುವ ಗಡಿ ಉದ್ವಿಗ್ನತೆ ಮತ್ತು ಅದರ ಜೊತೆಗಿನ ವ್ಯಾಪಾರ ಅಸಮತೋಲನಗಳ ಕಾರಣದಿಂದ ಚೀನಾದೊಡನೆ ರಾಜತಾಂತ್ರಿಕ ಮಾತುಕತೆ ನಡೆಸುವುದು ಸವಾಲಾಗಿದ್ದರೂ, ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಾ, ಚೀನಾದ ಜೊತೆಗಿನ ಸಂಬಂಧದಲ್ಲಿ ಸಮತೋಲನ ಕಾಯ್ದುಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ.

ಭಾರತ ಹಿಂದಿನಿಂದಲೂ ಯುರೋಪ್ ಮೇಲೆ ಕಡಿಮೆ ಗಮನ ಹರಿಸುತ್ತಿತ್ತು. ಆದರೆ ಮೋದಿಯವರ ಆಡಳಿತದಲ್ಲಿ ಈ ಧೋರಣೆ ಬದಲಾಗುತ್ತಿದ್ದು, ಭಾರತ ಫ್ರಾನ್ಸ್, ಜರ್ಮನಿ, ಮತ್ತು ಇಟಲಿಗಳಂತಹ ಪ್ರಮುಖ ಯುರೋಪಿಯನ್ ದೇಶಗಳೊಡನೆ ಮತ್ತು ಬ್ರುಸೆಲ್ಸ್‌ನ ಐರೋಪ್ಯ ಒಕ್ಕೂಟದೊಡನೆ ಸಂಬಂಧ ವೃದ್ಧಿಸಲು ಸಕ್ರಿಯವಾಗಿ ಪ್ರಯತ್ನ ನಡೆಸುತ್ತಾ ಬಂದಿದೆ.

ಭಾರತದ ಬಹುಪಕ್ಷೀಯ ಸ್ನೇಹದ ನೀತಿಯಲ್ಲಿ ಅಮೆರಿಕಾ ಬಹುದೊಡ್ಡ ಪಾತ್ರ ವಹಿಸುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತದ ಆರ್ಥಿಕತೆ, ತಂತ್ರಜ್ಞಾನ, ಮತ್ತು ಮಿಲಿಟರಿ ಅಭಿವೃದ್ಧಿಯನ್ನು ಸಾಧಿಸಲು ಅಮೆರಿಕಾದ ಜೊತೆಗಿನ ಸಹಯೋಗ ಅತ್ಯವಶ್ಯಕ ಎನ್ನುವುದನ್ನು ಭಾರತೀಯ ನಾಯಕರೂ ಮನಗಂಡಿದ್ದಾರೆ.

ಇದೇ ವೇಳೆ, ಭಾರತ ತನ್ನ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಕಾಪಾಡಿಕೊಳ್ಳುವ ಸಲುವಾಗಿ, ಕೇವಲ ಒಂದು ಪ್ರಮುಖ ಶಕ್ತಿಯ ಮೇಲೆ ಅವಲಂಬಿತವಾಗಿರಬಾರದು ಎನ್ನುವುದು ಭಾರತದ ನಾಯಕತ್ವದ ಆಲೋಚನೆಯಾಗಿದೆ. ಜಾಗತಿಕ ಹಿತಾಸಕ್ತಿಗಳು ಮತ್ತು ಸಹಯೋಗಗಳು ಕಾಲಕ್ರಮೇಣ ಬದಲಾಗುತ್ತಾ ಸಾಗುವುದರಿಂದ, ಯಾವುದಾದರೂ ಒಂದು ದೇಶದೊಡನೆ ಮಾತ್ರ ಭಾರತ ಹೆಚ್ಚು ಆತ್ಮೀಯ ಸಂಬಂಧ ಹೊಂದಿದ್ದರೆ, ಅದರಿಂದ ಸನ್ನಿವೇಶಗಳು ಬದಲಾದಾಗ ಭಾರತಕ್ಕೆ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಕುಂಠಿತವಾಗುವ ಸಾಧ್ಯತೆಗಳಿವೆ.

ಟ್ರಂಪ್ ಈಗ ಬಹಿರಂಗವಾಗಿ ಮೈತ್ರಿಕೂಟಗಳ ಮಹತ್ವವನ್ನು ಪ್ರಶ್ನಿಸುತ್ತಿದ್ದು, ಅಮೆರಿಕಾದ ಹಲವು ದೀರ್ಘಕಾಲೀನ ಸಹಯೋಗಿಗಳನ್ನು ಟೀಕಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದ ಜಾಗರೂಕತೆಯ ವಿಧಾನ ಒಂದು ಉತ್ತಮ ನಡೆಯಾಗಿದೆ. ಯಾವುದೇ ಒಂದು ದೇಶದ ಮೇಲೆ ಸಂಪೂರ್ಣವಾಗಿ ಅವಲಂಬನೆ ಹೊಂದದೆ, ಭಾರತ ಅಮೆರಿಕಾದಲ್ಲಿ ಯಾರೇ ಅಧಿಕಾರದಲ್ಲಿದ್ದರೂ ತಾನು ಬದಲಾಗುತ್ತಿರುವ ಭೌಗೋಳಿಕ ರಾಜಕಾರಣದಲ್ಲಿ ಹೊಂದಿಕೊಂಡು, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬಲ್ಲೆ ಎಂದು ಖಚಿತಪಡಿಸಿದೆ.

ಅಮೆರಿಕಾ - ಚೀನಾ ನಡುವೆ ಸ್ನೇಹದ ಕುರಿತು ಭಾರತ ನೀಡುವ ಪ್ರತಿಕ್ರಿಯೆ ವಾಷಿಂಗ್ಟನ್ ಜೊತೆಗಿನ ಅದರ ಸಹಯೋಗವನ್ನು ಇನ್ನಷ್ಟು ಭದ್ರಪಡಿಸುವ ಗುರಿ ಹೊಂದಿದೆ. ಭಾರತದ ಒಟ್ಟಾರೆ ಅಭಿವೃದ್ಧಿ ಮತ್ತು ಸಾಮರ್ಥ್ಯಕ್ಕೆ ಬೆಂಬಲ ನೀಡುವ ಇಚ್ಛೆ ಮತ್ತು ಶಕ್ತಿಯನ್ನು ಹೊಂದಿರುವ ಕೆಲವೇ ರಾಷ್ಟ್ರಗಳ ಪೈಕಿ ಅಮೆರಿಕಾ ಸಹ ಒಂದಾಗಿದೆ. ಮೋದಿ ಮತ್ತು ಟ್ರಂಪ್ ಉಭಯ ರಾಷ್ಟ್ರಗಳ ಸಹಕಾರಕ್ಕೆ ಸೂಕ್ತ ತಳಹದಿಯನ್ನು ನಿರ್ಮಿಸಿದ್ದು, ಭವಿಷ್ಯದಲ್ಲಿ ಭಾರತ ಮತ್ತು ಅಮೆರಿಕಾಗಳು ಜೊತೆಯಾಗಿ ಕಾರ್ಯ ನಿರ್ವಹಿಸಲು ಸೂಕ್ತ ಚೌಕಟ್ಟನ್ನು ಒದಗಿಸಿದ್ದಾರೆ.

ಇಮೇಲ್: girishlinganna@gmail.com