ಯಶ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ನಗರದ ಲೂಲು ಮಾಲ್‌ನಲ್ಲಿ ಭಾನುವಾರ ನಡೆಯಿತು. ಟ್ರೇಲರ್ ಅನ್ನು ನಟ ಯಶ್ ಬಿಡುಗಡೆ ಮಾಡಿದರು. ಈ ವೇಳೆ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದು ಕೆಲಕಾಲ ಬಿಗುವಿನ ವಾತಾರಣವನ್ನು ಸೃಷ್ಟಿಸಿತು.
ಭದ್ರತಾ ಸಿಬ್ಬಂದಿ ಇರುವುದನ್ನೂ ಅಭಿಮಾನಿಗಳು ಯಶ್ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ವೇದಿಕೆಯತ್ತ ದೌಡಾಯಿಸಿದರು. ವೇದಿಕೆಯತ್ತ ನುಗ್ಗಿದ ಕೆಲವರತ್ತ ಪೊಲೀಸರು ಲಾಟಿ ಬೀಸಿದರು. ಸಾವಿರಾರು ಜನರ ಬಂದಿದ್ದರಿಂದ ಕೆಲ ಹೊತ್ತು ಲೂಲು ಮಾಲ್‌ನ ಸುತ್ತಲೂ ಸಂಚಾರ ದಟ್ಟಣೆಯಾಗಿತ್ತು. ಅಭಿಮಾನಿಗಳು 'ರಾಕಿಬಾಯ್' ಎಂಬ ಕೂಗಿದರು. ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಮಾರಂಭದಲ್ಲಿ ಮಾತನಾಡಿದ ಯಶ್, 'ಕಳೆದ ನಾಲ್ಕು ವರ್ಷಗಳಿಂದ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿಗೆ ಹೋಗಿಲ್ಲ. ನನ್ನ ಮೊದಲ ಸಿನಿಮಾ 'ಮೊಗ್ಗಿನ ಮನಸು' ನಿರ್ಮಿಸಿದ್ದ ನಿರ್ಮಾಪಕ ಇ.ಕೃಷ್ಣಪ್ಪ ಅವರ ಪ್ರೀತಿಗಾಗಿ ಇಲ್ಲಿಗೆ ಬಂದಿರುವೆ. ಯಾರೇ ಬಂದು ಪ್ರಚಾರ ಮಾಡಿದರೂ ಚಿತ್ರ ಚೆನ್ನಾಗಿದ್ದರೆ ಮಾತ್ರ ಜನ ಒಪ್ಪಿಕೊಳ್ಳುತ್ತಾರೆ. ಕನ್ನಡದ ಪ್ರೇಕ್ಷಕರು ಒಳ್ಳೆ ಸಿನಿಮಾಗಳನ್ನು ನೋಡುತ್ತಾರೆ. ಆದರೆ ಇಲ್ಲಿನ ನಿರ್ದೇಶಕರು ಮತ್ತು ನಟರು ಅಪ್‌ಗ್ರೇಡ್ ಆಗಬೇಕಿದೆ' ಎಂದರು.
'ಕನ್ನಡ ಚಿತ್ರರಂಗವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸಿದೆ. ಆ ಕನಸಿನ ಭಾಗವಾಗಿ 'ಟಾಕ್ಸಿಕ್' ಚಿತ್ರದ ಕೆಲಸಗಳು ನಡೆದಿವೆ. ಈ ಹಿಂದೆ ನನ್ನನ್ನು ಅನೇಕ ಜನ ಬೆಳೆಸಿದ್ದರಿಂದ ನಾನು ಇವತ್ತು ಈ ಸ್ಥಾನದಲ್ಲಿದ್ದೇನೆ. ನಾನು ಏನೂ ಅಲ್ಲದಿರುವಾಗ ನನಗೆ ಸಹಾಯ ಮಾಡಿದ ಯಾರನ್ನೂ ನಾನು ತನಕ ಮರೆತಿಲ್ಲ' ಎಂದು ಯಶ್ ತಿಳಿಸಿದರು.
'ಮನದ ಕಡಲು' ಚಿತ್ರಕ್ಕೆ ಇ.ಕೃಷ್ಣಪ್ಪ ಬಂಡವಾಳ ಹೂಡಿದ್ದಾರೆ. ನಾಯಕ ಸುಮುಖ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ಇಡೀ ಚಿತ್ರತಂಡ ಸಮಾರಂಭದಲ್ಲಿ ಹಾಜರಿತ್ತು.
0 Comments